ಬಿಸಿನೀರು (ಬೆಂದ್ರು) ತೀರ್ಥ
ದಕ್ಷಿಣ ಭಾರತದಲ್ಲಿಯೇ ಅಪರೂಪವಾದ ಬಿಸಿನೀರ ಬುಗ್ಗೆಗಳ ತಾಣ
ದಕ್ಷಿಣ ಭಾರತದಲ್ಲಿಯೇ ಅಪರೂಪವಾದ ಬಿಸಿನೀರ ಬುಗ್ಗೆಗಳ ತಾಣ
ಕರ್ನಾಟಕ ಪ್ರಾಂತ್ಯದ ಅಪರೂಪದ ಬಿಸಿನೀರ ಬುಗ್ಗೆ
ದಕ್ಷಿಣ ಭಾರತದಲ್ಲಿಯೇ ಅದರಲ್ಲೂ ಕರ್ನಾಟಕ ಪ್ರಾಂತ್ಯದಲ್ಲಿರುವ ಬಿಸಿನೀರುತೀರ್ಥವೆಂಬುದೊಂದು ಅಪರೂಪವಾದ ಬಿಸಿನೀರ ಬುಗ್ಗೆಗಳ ತಾಣವಾಗಿದೆ.
ಬಿಸಿನೀರುತೀರ್ಥವು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು, ಇರ್ದೆ ಗ್ರಾಮದ ಗೋಪಾಲಕ್ಷೇತ್ರದಲ್ಲಿ ಸೀರೆ ನದಿ (ವರದಾ ನದಿ)ಯ ದಕ್ಷಿಣದ ದಡದಲ್ಲಿ ಶೋಭಾಯಮಾನವಾಗಿದೆ.
ತುಳು
ಬೆಂದ್ರುತೀರ್ತೊ
ಕರ್ನಾಟಕ ಸರಕಾರ ಗಜೆಟ್
ಬೆಂದ್ರು ತೀರ್ಥ
ಸಂಸ್ಕೃತ
ಘರ್ಮ ತೀರ್ಥ (ಉಷ್ಣತೀರ್ಥ)
ಪುತ್ತೂರು ಪಾಣಾಜೆ ರಸ್ತೆಯಲ್ಲಿ 13 ಕಿಲೋಮೀಟರು ದೂರದಲ್ಲಿ ಬಲಬದಿಗೆ (ಪಶ್ಚಿಮಕ್ಕೆ) ತಿರುಗುವ ರಸ್ತೆಯಲ್ಲಿ ಒಂದು ಕಿಲೋಮೀಟರು ಹೋಗಿ ಪುನಃ ಬಲಕ್ಕೆ (ಉತ್ತರ ದಿಕ್ಕಿಗೆ) ತಿರುಗುವ ಶ್ರೀನಿವಾಸ ರಸ್ತೆಯಲ್ಲಿ ಒಂದು ಕಿಲೋಮೀಟರು ಹೋದಾಗ ಬಿಸಿನೀರು (ಬೆಂದ್ರು) ತೀರ್ಥ ಸಿಗುತ್ತದೆ.
ಪುರಾತನ ಐತಿಹ್ಯದ ಪ್ರಕಾರ ಮತ್ತು ಶ್ರೀ ವಿಷ್ಣುಮೂರ್ತಿ ದೇವಾಲಯದ ನವೀಕರಣಕಾರ್ಯಕ್ಕಾಗಿ ನಡೆಸಿದ ಅಷ್ಟಮಂಗಲಪ್ರಶ್ನೆ ಫಲಪ್ರಕಾರ ದೇವಾಲಯಕ್ಕೂ ಬಿಸಿನೀರುತೀರ್ಥಕ್ಕೂ ನಿಕಟ ಸಂಬಂಧವಿರುವುದು ತಿಳಿದುಬಂದಿರುತ್ತದೆ. ಉತ್ಸವಾದಿ ಸಂದರ್ಭಗಳಲ್ಲಿ ಬಿಸಿನೀರು ತೀರ್ಥದಲ್ಲಿ ಗಂಗಾಪೂಜೆ ಮಾಡಿ ನೀರನ್ನು ತೆಗೆದುಕೊಂಡು ದೇವಾಲಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಅಭಿಷೇಕ ಮಾಡುವುದು ಸಂಪ್ರದಾಯವಾಗಿದೆ.
ಸಿಂಹಮಾಸದ ಸೋಣೆ ತಿಂಗಳ ಅಮಾವಾಸ್ಯೆ (ಸೆಪ್ಟಂಬರ್)
ತೀರ್ಥ ಅಮಾವಾಸ್ಯೆಯ ದಿನ (ಸಿಂಹಮಾಸದ ಸೋಣೆ ತಿಂಗಳ ಅಮಾವಾಸ್ಯೆ, ಸಾಮಾನ್ಯವಾಗಿ ಇಂಗ್ಲೀಷು ತಿಂಗಳ ಸೆಪ್ಟಂಬರಿನ ಮೊದಲ ಭಾಗದಲ್ಲಿ ಬರುವುದು) ಇಲ್ಲಿ ಸ್ನಾನ ಮಾಡುವುದಕ್ಕೆ ಬಹಳ ಮಹತ್ತ್ವವಿದೆ.
ಊರ ಹಿರಿಯರಿಂದ ಸಂಗ್ರಹವಾದ ವಿಷಯಗಳ ಆಧಾರ ಪ್ರಕಾರ ತೀರ್ಥ ಅಮಾವಾಸ್ಯೆಯ ಹಿಂದಿನ ದಿನವಾದ ಚತುರ್ದಶಿಯಂದು, ಜಗದ್ರಕ್ಷಕನಾದ ಶ್ರೀಮನ್ನಾರಾಯಣನು ಲಕ್ಷ್ಮೀದೇವೀಸಮೇತನಾಗಿ ಗರುಡಾರೂಢನಾಗಿ ಬಂದು ಇಲ್ಲಿ ಸ್ನಾನ ಮಾಡುವನೆಂದೂ, ಅವನು ಸ್ನಾನ ಮಾಡಿದ ನೀರಿನಲ್ಲಿ ತೀರ್ಥಸ್ನಾನ ಮಾಡುವುದು ಮುಕ್ತಿಪ್ರದವೆಂದೂ ನಂಬಲಾಗಿದೆ.
ಲಕ್ಷ್ಮೀನಾರಾಯಣಸ್ವರೂಪಿಗಳಾದ ನವ ವಧೂವರರು ಇಲ್ಲಿ ತೀರ್ಥಸ್ನಾನ ಮಾಡುವುದು ಇದಕ್ಕೆ ಸಾಕ್ಷಿಯಾಗಿದೆ. ಗರುಡಪಕ್ಷಿಗಳೆರಡು ಪ್ರತಿವರ್ಷವೂ ಬಂದು ಸ್ವಲ್ಪ ಕಾಲ ನೆಲಸಿ, ನಾಲ್ಕಾರಾಗಿ ಹೋಗುವುದನ್ನು ಇಂದಿಗೂ ಕಾಣಬಹುದು.
ಶ್ರೀರಾಮನು ವನವಾಸಾನಂತರ ರಾವಣಾದಿಗಳನ್ನು ಸಂಹರಿಸಿದ ಮೇಲೆ, ಪುಷ್ಪಕ ವಿಮಾನದಲ್ಲಿ ಆಯೋಧ್ಯೆಗೆ ಹೋಗುವ ದಾರಿಯಾಗಿ ಸೀತಾ, ಲಕ್ಷ್ಮಣ, ಸುಗ್ರೀವಾದಿಗಳ ಸಮೇತ ಇಲ್ಲಿ ತೀರ್ಥಸ್ನಾನ ಮಾಡಿ ಪುನೀತನಾಗಿ ಮುಂದೆ ಪ್ರಯಾಣ ಬೆಳೆಸಿದನೆಂದು ಪ್ರತೀತಿಯಿದೆ. ಈ ವಿಚಾರವು ದಿ। ಆರಂಬ್ಯ ರಾಮಚಂದ್ರ ಕಲ್ಲೂರಾಯರು ತಮ್ಮ ಹಿರಿಯರ ಆಶೀರ್ವಚನ ಮತ್ತು ಭಗವತ್ಪರಣೆಯಿಂದ ಹಾಡಿದ ಶ್ಲೋಕಗಳಲ್ಲಿ ವರ್ಣಿಸಲ್ಪಟ್ಟಿದೆ. ತೀರ್ಥಸ್ನಾನದ ವಿಧಿ ಮತ್ತು ಸುತ್ತಲಿನ ವರ್ಣನೆಯೂ ಅದರಲ್ಲಿದೆ.
ಪವಿತ್ರ ಸ್ನಾನ ಪದ್ಧತಿ
ನದಿಯಲ್ಲಿ ಸ್ನಾನಮಾಡಿ ತೀರ್ಥಕ್ಕೆ ಪ್ರದಕ್ಷಿಣೆ ಬಂದು ಗಂಗಾಪೂಜೆ ಮಾಡಿ ಸ್ನಾನದ ಸಂಕಲ್ಪ ಮಾಡಿ ತೀರ್ಥದಲ್ಲಿ ಒಂದು ಪೂರ್ಣ ಮುಳುಗು ಹಾಕುತ್ತ ಐದು ಎಲೆ, ಒಂದು ಅಡಿಕೆ ಮತ್ತು ಒಂದು ನಾಣ್ಯವನ್ನು ಬಿಡುವುದು ಪದ್ಧತಿ. ಪುನಃ ತೀರ್ಥಕ್ಕೆ ಸುತ್ತು ಬಂದು ಇನ್ನೊಂದು ಮುಳುಗು. ಇದೇ ರೀತಿ ಮೂರನೇ ಮುಳುಗು ಹಾಕಿದ ಮೇಲೆ ಪಂಚಮುಖೀ ತೀರ್ಥ ಸ್ನಾನ ಮಾಡಿ ಬಟ್ಟೆಯನ್ನು ಹಿಂಡಿ ಪ್ರಾರ್ಥನೆ ಮಾಡುತ್ತ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಬಂದು ಹಣ್ಣು-ಕಾಯಿ, ಕಾಣಿಕೆ ಮೊದಲಾದವುಗಳನ್ನು ಅರ್ಪಿಸಿ ತೀರ್ಥ ಪ್ರಸಾದ ತೆಗೆದುಕೊಳ್ಳುವುದು ನಿಯಮವಾಗಿದೆ.
ಅಂಟುಜಾಡ್ಯವಿರುವವರಿಗೆ, ಆಶೌಚದವರಿಗೆ ಕೊಡದಲ್ಲಿ ನೀರನ್ನು ಮೇಲೆ ತಂದು ಕಲಶಸ್ನಾನ ಮಾಡಿಸುವುದರಿಂದ ತೀರ್ಥದ ಪಾವಿತ್ರ್ಯವನ್ನು ಕಾಪಾಡಲಾಗುತ್ತದೆ.
ಉಷ್ಣತೆ
108°F (39°C)
ಹರಿವಿನ ಪ್ರಮಾಣ
ಗಂಟೆಗೆ 1350 - 4600 ಲೀಟರ್
ವಿಶೇಷ
ಗಂಧಕದ ವಾಸನೆ, ಕುಡಿಯಲು ಯೋಗ್ಯ
ಸದಾಕಾಲವೂ ಕೊಳದ ಮಧ್ಯದಲ್ಲಿ ಕಲ್ಲುಗಳೆಡೆಯಿಂದ ಚಿಮ್ಮುವ ಬಿಸಿನೀರ ಬುಗ್ಗೆಗಳು ಇಲ್ಲಿಯ ವಿಶೇಷವಾಗಿದೆ. ಗಂಟೆಗೆ 1350 ರಿಂದ 4600 ಲೀಟರುಗಳಷ್ಟು ಚಿಮ್ಮುವ ನೀರು 108° ಫೇರನ್ಹೀಟ್ (39° ಸೆಂಟಿಗ್ರೇಡ್) ಉಷ್ಣತೆಯನ್ನು ಹೊಂದಿದೆ. ಈ ನೀರನ್ನು ಕುಡಿಯಲು ಉಪಯೋಗಿಸಬಹುದೆಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಗಂಧಕದ ವಾಸನೆಯಿಂದ ಕೂಡಿದ ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಕೆಲವೊಂದು ಚರ್ಮರೋಗಗಳು ಗುಣವಾಗುತ್ತವೆ ಎಂಬುದು ಅನುಭವ ವೇದ್ಯವಾಗಿದೆ.
"ಗಜ್ಜಿಗ್ ಅಜ್ಜಿನ ಮರ್ದಾಂಡ ಮೂಜಿ ತಿಂಗೊಳು, ಬೆಂದ್ರುತೀರ್ತೊ ಆಂಡ ಮೂಜಿ ಮುರಂಗು"
ಎಂದರೆ ಕಜ್ಜಿಗೆ ಅಜ್ಜಿಯ
ಮದ್ದು ಮೂರು ತಿಂಗಳು ಆದರೆ ಬಿಸಿನೀರು ತೀರ್ಥದಲ್ಲಿ ಮೂರು ಮುಳುಗು ಸಾಕು — ತುಳು ನಾಣ್ಣುಡಿ
ಸುಮಾರು ಅರುವತ್ತು ವರ್ಷಗಳ ಹಿಂದೆ ಸಹೃದಯಿ ದಿ। ಡಾ! ಶೀನಪ್ಪ ಭಂಡಾರಿಯವರು ಬಿಸಿನೀರು ಕೊಳದ ಸುತ್ತಲೂ ಕೆಂಪು ಕಲ್ಲಿನಿಂದ ಕಟ್ಟೆ, ಮೆಟ್ಟಲುಗಳನ್ನು ಕಟ್ಟಿಸಿದರು.
1986 ರಲ್ಲಿ ಊರ ಪರವೂರ ಮಹನೀಯರೆಲ್ಲರೂ ಸೇರಿ 'ಬೆಂದ್ರು ತೀರ್ಥ ಅಭಿವೃದ್ಧಿ ಕ್ರಿಯಾಸಮಿತಿ'ಯನ್ನು ರಚಿಸಿಕೊಂಡು ಮಾಡಿದ ಪ್ರಯತ್ನಗಳಿಂದಾಗಿ ಮತ್ತು ಅಗತ್ಯವಿದ್ದ ರಸ್ತೆಗಾಗಿ ದಿ। ಯನ್. ಶ್ರೀನಿವಾಸ ರೈಗಳ ಮತ್ತು ಕೊಳದ ಸುತ್ತಲೂ ದಿ। ಸರಸ್ವತಿ ಭಂಡಾರಿಯವರ ಸ್ಥಳದಾನದಿಂದಾಗಿ ಈ ಬಿಸಿನೀರು ತೀರ್ಥದ ತಾಣವು ಕರ್ನಾಟಕ ಸರಕಾರದ ವತಿಯಿಂದ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಾಗಿ ಸುತ್ತಲೂ ಕಲ್ಲು ಹಾಸಿ, ಪ್ರವಾಸೀ ಕೇಂದ್ರವೆನಿಸಿತು. ಪ್ರವಾಸಿಗಳು ಅಲ್ಲಿ ತಮ್ಮ ಉಪಾಹಾರಕ್ಕೆ ಬೇಕಾದುದನ್ನು ತಾವೇ ತೆಗೆದುಕೊಂಡು ಹೋಗಬೇಕಾಗಿದೆ.
ಮಳೆಗಾಲದಲ್ಲಿ ಕೆಂಪು ಸೀರೆಯನ್ನುಟ್ಟು ಹರಿಯುವ, ಬೇಸಿಗೆಯಲ್ಲಿ ಅಣೆಕಟ್ಟಿನಿಂದಾಗಿ ನೀರಿನಿಂದ ತುಂಬಿ ತುಳುಕುತ್ತಿರುವ ನದೀಸಂಗಮಪ್ರದೇಶದಿಂದ ಕೂಡಿದ, ಸದಾ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಬೆಳೆದುನಿಂತ ತೆಂಗು ಕಂಗುಗಳ ಹಸಿರಿನಿಂದಾವೃತವಾದ ಅಶ್ವತ್ಥ ವೃಕ್ಷ ಮತ್ತು ಚಿಕ್ಕ ಹೂದೋಟದಿಂದೊಡಗೂಡಿದ ಬಿಸಿನೀರು (ಬೆಂದ್ರು) ತೀರ್ಥದ ಈ ತಾಣವು ನಯನ ಮನೋಹರವಾಗಿ ಅನುಪಮವೆನಿಸಿದೆ.
1989 ರಲ್ಲಿ ಸರಕಾರದಿಂದ ನಿರ್ಮಿಸಲಾದ ಕಾಲು ಸೇತುವೆಯಿಂದ ಕೂಡಿದ ಅಣೆಕಟ್ಟಿನಿಂದಾಗಿ ದಕ್ಷಿಣೋತ್ತರದಡಗಳಿಗೆ ಸಂಪರ್ಕದ ಜೊತೆಗೆ ಸುತ್ತಲಿನ ಕೃಷಿಗೆ ಬೇಕಾದ ನೀರು ತುಂಬಿ, ಹಸಿರು ವರ್ಣಮಾಲೆಯಿಂದ ಆವರಿಸಿ, ನೋಡುವವರ ಮನಸ್ಸಿಗೆ ನದೀಪರಿಸರವು ಬಹಳ ಆಹ್ಲಾದಕರವಾಗಿದೆ.