Skip to content
📜

ಗೋಪಾಲ ಕ್ಷೇತ್ರ & ದೇವಾಲಯ ಇತಿಹಾಸ

ಕಣ್ವ ಮಹರ್ಷಿಗಳ ಶಿಷ್ಯರು ನೆಲೆಸಿದ್ದ ಪವಿತ್ರವಾದ ಗೋಪಾಲ ಕ್ಷೇತ್ರ ಮತ್ತು ಶ್ರೀ ವಿಷ್ಣುಮೂರ್ತಿ ದೇವಾಲಯದ ಸಂಪೂರ್ಣ ಇತಿಹಾಸ

🕉️

ಗೋಪಾಲ ಕ್ಷೇತ್ರ

ಪುರಾತನ ಕಾಲದ ಪವಿತ್ರ ತಾಣ

ಪುರಾತನ ಕಾಲದಲ್ಲಿ ಕಣ್ವ ಮಹರ್ಷಿಗಳ ಶಿಷ್ಯರು ನೆಲಸಿದ್ದ ಇರ್ದೆ ಗ್ರಾಮದ 'ಗೋಪಾಲಕ್ಷೇತ್ರ' ಎಂಬಲ್ಲಿ 'ಶ್ರೀ ವಿಷ್ಣುಮೂರ್ತಿ ದೇವಾಲಯ', 'ಬಿಸಿನೀರು ತೀರ್ಥ' (ಬೆಂದ್ರು ತೀರ್ಥ) ಮತ್ತು 'ಕದಿಕೆಚಾವಡಿ' ಇದೆ.

ದೇವಾಲಯದ ಪಶ್ಚಿಮ ಭಾಗದಲ್ಲಿ ಚೆಲ್ಯಡ್ಕ, ಬೈಲಾಡಿ, ಬೆಟ್ಟಂಪಾಡಿ ಎಂಬ ಹಳ್ಳ ಹೊಳೆಗಳು ಸೇರುವುದರಿಂದ ಇದು ಪವಿತ್ರವಾದ ತ್ರಿವೇಣೀಸಂಗಮವಾಗಿದೆ. ಈ ತ್ರಿವೇಣೀ ಸಂಗಮಕ್ಕೆ ದೇವಾಲಯದ ಕೆಳಭಾಗದಿಂದ ಗುಪ್ತಗಾಮಿನಿಯಾಗಿ ಸೇರುವ 'ವಿಷ್ಣು ತೀರ್ಥ', ನದಿಯ ದಡದಲ್ಲಿರುವ 'ಬಿಸಿನೀರು ತೀರ್ಥ' (ಬೆಂದ್ರು ತೀರ್ಥ) ಇವುಗಳಿಂದ ಇದು "ಪಂಚಮುಖೀ" ತೀರ್ಥವೂ ಆಗಿದೆ. ಇಲ್ಲಿಂದ ಮುಂದೆ ಹರಿಯುವ ನದಿಯನ್ನು ಸೀರೆ ನದಿ (ವರದಾ ನದಿ) ಎಂದು ಕರೆಯಲಾಗುವುದು. ಈ ಪುಣ್ಯನದಿಯು ವಯ್ಯಾರದಿಂದ ಹರಿದು ನದಿಯ ಇಕ್ಕೆಲಗಳಲ್ಲಿ ಬೇಸಾಯಕ್ಕೆ ಬೇಕಾದ ನೀರನ್ನು ಒದಗಿಸಿ ಮುಂದೆ ಕುಂಬಳೆಯ ಬಳಿ ಸಿರಿಯಾ ಎಂಬಲ್ಲಿ ಪಡುಗಡಲಿಗೆ ಸೇರುತ್ತದೆ.

"ಬಿಸಿನೀರು ತೀರ್ಥ"ದಿಂದ ಕೂಗಳತೆಯ ದೂರದಲ್ಲಿ ಪೂರ್ವಕ್ಕೆ "ಶ್ರೀ ವಿಷ್ಣುಮೂರ್ತಿ ದೇವಾಲಯ", ಪಶ್ಚಿಮಕ್ಕೆ ನಂಬಿದವರಿಗೆ ಇಂಬುಕೊಡುವ ತುಳುನಾಡಿನ "ಪೂಮಾಣಿ-ಕಿನ್ನಿಮಾಣಿ" ದೈವಗಳ "ಕದಿಕೆಚಾವಡಿ" ಇದೆ.

🙏

ಭಕ್ತರು ತೀರ್ಥಸ್ನಾನದಿಂದ ಪರಿಶುದ್ಧರಾಗಿ ಹರಿಕೆ, ಸೇವೆ ಒಪ್ಪಿಸುವ, ಸಕಲ ಇಷ್ಟಾರ್ಥಸಿದ್ದಿಗೆ ಪ್ರಾರ್ಥಿಸುವ, ದೇವ, ದೈವಗಳ ಈ ತಾಣವೇ ಪರಮಪಾವನವಾದ "ಗೋಪಾಲಕ್ಷೇತ್ರ"ವಾಗಿದೆ.

🐯

ಕ್ಷೇತ್ರದ ಮೂಲ ಕಥೆ

ಹುಲಿಗಳು ಮತ್ತು ದನಗಳ ಸಹಜೀವನ

ದಕ್ಷಿಣ ಭಾರತದ ಕರ್ನಾಟಕದ ಈ ಭಾಗದಲ್ಲಿ ತಮಗೆ ಜಪತಪಾದಿ ಅನುಷ್ಠಾನಗಳಿಗೆ ಅನುಕೂಲವಾದ ತಾಣವನ್ನು ಕಣ್ವ ಮಹರ್ಷಿಗಳ ಶಿಷ್ಯರು ಅರಸುತ್ತ ಬಂದರು. ಆಗ ಪ್ರಶಾಂತವಾದ, ಸಸ್ಯ-ಜಲಸಮೃದ್ಧಿಯುಳ್ಳ ತ್ರಿವೇಣೀ ಸಂಗಮದ ಈ ಪರಿಸರದಲ್ಲಿ ಶ್ರೀ ವಿಷ್ಣು ಮೂರ್ತಿ ದೇವಾಲಯವಿರುವ ಸ್ಥಳದಲ್ಲಿ ಹುಲಿಗಳು ಮತ್ತು ದನಗಳು ಜನ್ಮ ಶತ್ರುತ್ವವನ್ನು ಮರೆತು ಪರಸ್ಪರ ಪ್ರೀತಿಯಿಂದ ವಾಸಿಸುತ್ತಿದ್ದವಂತೆ.

ಇಂತಹ ಅಪೂರ್ವ ದೃಶ್ಯವನ್ನು ನೋಡಿ, ಇದೇ ಪರಿಸರದಲ್ಲಿ ಆಶ್ರಮವನ್ನು ಮಾಡಿಕೊಂಡು ಸಾಕಾರಮೂರ್ತಿಯಾಗಿ, ಶತ್ರುಗಳನ್ನು ಮಿತ್ರರಾಗಿಸುವ ಮತ್ತು ಎಲ್ಲ ಸಂಕಷ್ಟಗಳನ್ನು ನಿವಾರಿಸಿ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ವರದಹಸ್ತನಾದ ಚಕ್ರಧರ "ಶ್ರೀ ವಿಷ್ಣು ಮೂರ್ತಿ" ದೇವರನ್ನು ಈ ಪವಿತ್ರ ಜಾಗದಲ್ಲಿ ಅವರು ಪ್ರತಿಷ್ಠಾಪಿಸಿ ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡರು.

ಅಂತೆಯೇ ಅನನ್ಯ ಭಕ್ತಿಯಿಂದ ಬಿಸಿನೀರು (ಬೆಂದ್ರು) ತೀರ್ಥಸ್ನಾನ, ಪಂಚಮುಖೀ ತೀರ್ಥಸ್ನಾನ ಮತ್ತು ಶ್ರೀ ವಿಷ್ಣು ಮೂರ್ತಿ ದೇವರ ಪೂಜೆ, ಗೋಪಾಲನೆ ಮಾಡುತ್ತ ಭಗವದ್ಧ್ಯಾನ ಪರಾಯಣರಾಗಿ ಇದ್ದರು. ಹೀಗಿರಲು ಗೋವುಗಳು ನಿರೀಕ್ಷೆಗೆ ಮೀರಿ ಸಂಖ್ಯಾ ವೃದ್ಧಿ, ಕ್ಷೀರವೃದ್ಧಿಯಿಂದ ಆಸುಪಾಸಿನಲ್ಲಿ ಸ್ವೇಚ್ಛೆಯಾಗಿ ಮೇಯುತ್ತ ಇರುತ್ತಿದ್ದ ಈ ಪರಿಸರವೇ ಗೋಪಾಲ ಕ್ಷೇತ್ರವಾಯಿತು. ಅದನ್ನೇ ಗೋಪಾಲಗದ್ದೆ (ಗೋಪಾಲ ಕಂಡೋ) ಎಂದೂ ಕರೆಯುತ್ತಾರೆ.

🪷
🛕

ಶ್ರೀ ವಿಷ್ಣು ಮೂರ್ತಿ ದೇವಾಲಯ

ಜೀರ್ಣೋದ್ಧಾರ ಮತ್ತು ಪುನರುಜ್ಜೀವನ

ಪುರಾತನ ಕಾಲದ ದೇವಾಲಯವು ನದೀಮುಖದ ತಗ್ಗು ಪ್ರದೇಶದಲ್ಲಿದ್ದುದರಿಂದ ತ್ರಿವೇಣಿ ಸಂಗಮದಲ್ಲಿ ಉಕ್ಕಿ ಹರಿಯುತ್ತಿದ್ದ ನೆರೆನೀರಿನಿಂದ ಮತ್ತು ಇತರ ಪ್ರಕೃತಿ ವಿಕೋಪಗಳಿಂದಾಗಿ ಶಿಥಿಲಗೊಂಡುದಲ್ಲದೆ ಉತ್ಸವಾದಿಗಳಲ್ಲಿ ಉಪಯೋಗಿಸುತ್ತಿದ್ದ ಬಲಿಮೂರ್ತಿ ಮತ್ತು ಬ್ರಹ್ಮರಥವೂ ಲೋಪಗೊಂಡಿತು. ಶತಮಾನಗಳಿಂದ ನಿತ್ಯನೈಮಿತ್ತಿಕಾದಿ ಪೂಜೆಗಳು ಮಕರಮಾಸ ೨೦ ರಂದು ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ಇತ್ಯಾದಿಗಳು ಮಾತ್ರ ನಡೆಯುತ್ತ ಬಂದುವು.

1978 ರಿಂದ 1992 ರ ವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ದೇವಾಲಯದ ಜೀರ್ಣೋದ್ಧಾರ ಕೆಲಸಗಳನ್ನು ನಡೆಸಲಾಗಿದೆ. ಅಷ್ಟಮಂಗಲ ಪ್ರಶ್ನೆ, ಪರಿಹಾರಕಾರ್ಯಗಳು, ಬಾಲಾಲಯರಚನೆ, ಸಂಪೂರ್ಣ ತಳಪಾಯವನ್ನು ಐದು ಅಡಿ ಎತ್ತರಿಸಿದ ಮೇಲೆ ಶಾಸ್ರೋಕ್ತ ರೀತಿಯಲ್ಲಿ ನೂತನ ದೇವಾಲಯದ ಶಂಕುಸ್ಥಾಪನೆ, ಪಂಚಾಂಗ, ನಿಧಿಕುಂಭಸ್ಥಾಪನೆ, ಗರ್ಭಗುಡಿ, ನಮಸ್ಕಾರಮಂಟಪಗಳನ್ನು ಕೆತ್ತನೆಗಳಿಂದ ಕೂಡಿದ ಕಾರ್ಕಳದ ಶಿಲೆಕಲ್ಲಿನಿಂದಲೇ ರಚಿಸಲಾಗಿದೆ. ಗೋಪುರದ ಪಂಚಾಂಗ, ಗೋಡೆಗಳನ್ನು ಕೆಂಪು ಕಲ್ಲಿನಿಂದ ಕಟ್ಟಿ, ಸಿಮೆಂಟು ಸಾರಣೆ ಮಾಡಲಾಗಿದೆ. ಮಾಡನ್ನು ಕಾಂಕ್ರೀಟಿನಿಂದ ಮಾಡಿ, ಅದರ ಮೇಲೆ ಹಂಚು ಇರಿಸಲಾಗಿದೆ.

ಹೊರಾಂಗಣವು ಪೂರ್ವದಲ್ಲಿ 16 ಕೋಲು (40 ಅಡಿ) ಮತ್ತು ಉಳಿದ ಮೂರು ದಿಕ್ಕುಗಳಲ್ಲಿ 9.1/2 ಕೋಲು (23.3/4 ಅಡಿ) ವಿಸ್ತಾರವಾಗಿದೆ. ದೇವಾಲಯದ ವಾಯವ್ಯ ಭಾಗದಲ್ಲಿ ಅಗ್ರಸಾಲೆ (ಅಡಿಗೆಶಾಲೆ)ಯ ಪಂಚಾಂಗವು ಶಿಲೆಕಲ್ಲಿನಿಂದಲೂ, ಗೋಡೆಯು ಕೆಂಪು ಕಲ್ಲಿನಿಂದಲೂ ಕಟ್ಟಲ್ಪಟ್ಟು ಮಾಡನ್ನು ಮರ ಮತ್ತು ಹಂಚುಗಳಿಂದ ರಚಿಸಲಾಗಿದೆ.

ಪುತ್ತೂರು ಪಾಣಾಜೆ ಮಾರ್ಗದಿಂದ ದೇವಸ್ಥಾನಕ್ಕೆ ತಿರುಗುವ ರಸ್ತೆಯಲ್ಲಿ ಮಹಾದ್ವಾರವನ್ನು ನಿರ್ಮಿಸಲಾಗಿದೆ.

🔔

ಜೀರ್ಣೋದ್ಧಾರ ಸಮಯರೇಖೆ

1969

ಕದಿಕೆಚಾವಡಿಯ ಜೀರ್ಣೋದ್ದಾರ ಕೆಲಸಗಳು ನಡೆದುವು.

1978 - 1992

ಶ್ರೀ ವಿಷ್ಣುಮೂರ್ತಿ ದೇವಾಲಯದ ಹಂತ ಹಂತವಾಗಿ ಜೀರ್ಣೋದ್ಧಾರ. ಅಷ್ಟಮಂಗಲ ಪ್ರಶ್ನೆ, ಪರಿಹಾರಕಾರ್ಯಗಳು, ಬಾಲಾಲಯರಚನೆ, ಶಂಕುಸ್ಥಾಪನೆ, ಗರ್ಭಗುಡಿ ಮತ್ತು ನಮಸ್ಕಾರಮಂಟಪ ನಿರ್ಮಾಣ.

1986 - 1990

ಬಿಸಿನೀರು ತೀರ್ಥದ ಜೀರ್ಣೋದ್ದಾರ ಕೆಲಸಗಳು ನಡೆದುವು.

ಮಾರ್ಚ್ 6-11, 1992

ಪ್ರಜಾಪತಿ ನಾಮ ಸಂವತ್ಸರದ ಫಾಲ್ಕುನ ಶುಕ್ಲಪಕ್ಷ ಸಪ್ತಮಿಯ ಕುಂಭಮಾಸ ೨೭ ನೇ ಬುಧವಾರ ಪೂರ್ವಾಹ್ನ ಗಂಟೆ 10:35ರ ನಂತರ ವೃಷಭಲಗ್ನದಲ್ಲಿ ದೇವಪ್ರತಿಷ್ಠೆ, ಅಷ್ಟಬಂಧ ನಡೆಯಿತು.

ಮಾರ್ಚ್ 14, 1992

ಬ್ರಹ್ಮಕಲಶೋತ್ಸವ ನಡೆಯಿತು. ಗೋಪುರದ ನೈಋತ್ಯ ಭಾಗದಲ್ಲಿ "ಧರ್ಮಶಾಸ್ತಾರ"ನ ಪ್ರತಿಷ್ಠೆಯೂ ಆಯಿತು. ರಾತ್ರಿ ರಂಗಪೂಜೆ, ದೇವರಬಲಿ, ಉತ್ಸವ, ಬೆಡಿಸೇವೆ ನಡೆಯಿತು.

ಮಾರ್ಚ್ 15, 1992

ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಕಾರ್ತಿಕ ಪೂಜೆ ನಡೆದು ದೈವಗಳ ಭಂಡಾರವು ಕದಿಕೆ ಚಾವಡಿಗೆ ಹೊರಟಿತು.

🪔

ಪವಿತ್ರ ಸಂಪ್ರದಾಯಗಳು

🕉️

ಗಂಗಾಪೂಜೆ ಸಂಪ್ರದಾಯ

ಪರ್ವಾದಿ ದಿನಗಳಲ್ಲಿ ಬಿಸಿನೀರು ತೀರ್ಥದಲ್ಲಿ ಗಂಗಾಪೂಜೆ ಮಾಡಿ, ನೀರನ್ನು ತಂದು ಶ್ರೀ ವಿಷ್ಣು ಮೂರ್ತಿ ದೇವರಿಗೆ ಅಭಿಷೇಕ ಮಾಡುವುದು ಸಂಪ್ರದಾಯವಾಗಿದೆ.

🙏

ಮುಕ್ತಿದಾಯಕ ಸೇವೆ

ಯಾತ್ರಾರ್ಥಿಗಳು ಬಿಸಿನೀರು ತೀರ್ಥಸ್ನಾನ ಮಾಡಿ, ಶ್ರೀ ವಿಷ್ಣುಮೂರ್ತಿ ದೇವರ ಸೇವೆ ಮಾಡುವುದು ಮುಕ್ತಿದಾಯಕವೆಂದು ಅನಾದಿ ಕಾಲದಿಂದಲೂ ನಂಬಿಕೊಂಡು ಬಂದ ವಿಚಾರವಾಗಿದೆ.

🌟

ಪುನರುಜ್ಜೀವನ

ಪುರಾತನ ಕಾಲದಲ್ಲಿ ಗೋಪೂಜೆ, ಅನ್ನದಾನ, ವಿದ್ಯಾದಾನ, ಉತ್ಸವಾದಿಗಳಿಂದ ಮೆರೆದಾಡುತ್ತಿದ್ದ "ಗೋಪಾಲಕ್ಷೇತ್ರ"ವು ಈಗ ಊರಪರವೂರ ಭಕ್ತರ ನಿಃಸ್ವಾರ್ಥ ಸೇವೆಯಿಂದ ಹಾಗೂ ಸರಕಾರದ ವತಿಯಿಂದ ಪುನಾರಚನೆಗೊಂಡು ಬೆಳಗುತ್ತಿದೆ.