Skip to content

ಪೂಮಾಣಿ - ಕಿನ್ನಿಮಾಣಿ ದೈವಗಳು

ರಾಜನ್ ದೈವಗಳು ಮತ್ತು ಕದಿಕೆ ಚಾವಡಿಯ ಸಂಪೂರ್ಣ ಕಥೆ

🙏

ದೈವಿಕ ಜನನ

ಕಂಚಿಕಟಗ, ತಲಕಾವೇರಿ

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಕಾವೇರಮ್ಮನ ಸುಂದರ ತಾಣ ತಲಕಾವೇರಿ. ಅಲ್ಲಿ ಕಂಚಿಕಟಗ ಎಂಬ ಊರು. ವೈದಿಕ ಮನೆತನದ ಬ್ರಾಹ್ಮಣೋತ್ತಮರಾದ ಲೋಕೋಂತ ಮಾಫಿರೆರು (ಭಟ್ಟರು) ಮತ್ತು ತಿಳಿಜಲ ಲಂಕಮ್ಮ ದೆಯ್ಯರು (ದೇವಿಯರು) ಎಂಬ ಪುಣ್ಯದಂಪತಿಗಳಿಗೆ ಮಹಾವಿಷ್ಣುವಿನ ಅಂಶದಿಂದ "ಪೂಮಾಣಿ" - "ಕಿನ್ನಿಮಾಣಿ"ಯರು ಜನಿಸಿದರು.

📚

ಬಾಲ್ಯ ಮತ್ತು ವಿದ್ಯಾಭ್ಯಾಸ

ಅವರು ಸರ್ವಗುಣಲಕ್ಷಣಗಳಿಂದ ಪ್ರವರ್ಧಮಾನರಾಗಿ ದಿನದಿಂದ ದಿನಕ್ಕೆ ಬೆಳಗುತ್ತ ಬಳೆಯುತ್ತಿದ್ದರು. ಮೂರನೇ ವರ್ಷದಲ್ಲಿ ಚೌಲ, ಏಳನೇ ವರ್ಷದಲ್ಲಿ ಉಪನಯನ ಮೊದಲಾದ ಸಂಸ್ಕಾರಗಳನ್ನು ಪಡೆದು, ವೇದಮಂತ್ರಾದಿಗಳ ಅಧ್ಯಯನವನ್ನು ಅತ್ಯಲ್ಪ ಕಾಲದಲ್ಲಿಯೇ ಪಡೆದರು.

ಹನ್ನೆರಡು ವರ್ಷವಾಗುತ್ತಲೇ ಧನುರ್ವಿದ್ಯೆಯನ್ನು ಕಲಿಯಬೇಕೆಂಬ ತಮ್ಮ ಮನಸ್ಸಿನ ಅಭಿಲಾಷೆಯನ್ನು ತಂದೆ ಲೋಕೋಂತರಲ್ಲಿ ವ್ಯಕ್ತಪಡಿಸಿದರು. ಅದರಂತೆ ಗರಡಿ ಮನೆಯಲ್ಲಿ ಧನುರ್ವೇದ, ಕುಸ್ತಿ ಮೊದಲಾದವುಗಳನ್ನು ಅಭ್ಯಾಸ ಮಾಡುವ ಜೊತೆಜೊತೆಗೆ ತಂತಮ್ಮ ಪ್ರತಿಭೆಯನ್ನೂ ತೋರತೊಡಗಿದರು. ಭೂಮಿಯಿಂದ ಚಂದ್ರಲೋಕಕ್ಕೆ ಸೂರ್ಯಮಂಡಲಗಳಿಗೆ ಬಾಣಗಳನ್ನು ಬಿಡುವಷ್ಟು ಪರಿಣತರಾದರು.

🙏

"ನೀವು ಈ ಬ್ರಹ್ಮಕ್ಷೇತ್ರದಿಂದ ಪರಶುರಾಮ ಕ್ಷೇತ್ರಕ್ಕೆ ಹೋಗಬೇಕು, ಅರ್ಥಾತ್ ತುಳುನಾಡಿನಲ್ಲಿ ದೈವಭಕ್ತಿ ಶ್ರದ್ಧೆಗಳು ನೆಲೆಗೊಳ್ಳುವಂತೆ ಮಾಡುವ 'ಪೂಮಾಣಿ - ಕಿನ್ನಿ ಮಾಣಿ' ದೈವಗಳಾಗಿ 1001 ಮಾಡರಮನೆ, 101 ಬಂಡಿ ಪಾಪೆಗಳಿಂದ ನೇಮೋತ್ಸವಗಳನ್ನು ಹೊಂದುವಂಥವರಾಗಿರಿ" — ವಿಷ್ಣುವಿನ ಅಶರೀರವಾಣಿ

🏇

ತುಳುನಾಡಿಗೆ ಪಯಣ

ಕುಮಾರಪರ್ವತ ಮತ್ತು ಸುಬ್ರಹ್ಮಣ್ಯ

ತಂದೆ ತಾಯಿಯವರಿಂದ ಆಶೀರ್ವಾದ ಪಡೆದು ವಿಷ್ಣುವಿನ ಆದೇಶ ಪಾಲನೆಗಾಗಿ, ಪೂಮಾಣಿ - ಕಿನ್ನಿ ಮಾಣಿಯರು ತಂಗಿ ದೆಯ್ಯಾರೆಯೊಂದಿಗೆ ಬಿಳಿ ಕುದುರೆಗಳಲ್ಲಿ ಪಶ್ಚಿಮದಿಕ್ಕಿಗೆ ಹೊರಟರು.

ಕುಮಾರಪರ್ವತಕ್ಕೆ ಬಂದು ಅಲ್ಲಿಂದ ಒಂದು ಬಾಣ ಬಿಟ್ಟರು. ಅದು ಶ್ರೀಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಧ್ವಜ ಸ್ತಂಭಕ್ಕೆ ತಾಗಿ ಅದನ್ನು ತುಂಡು ಮಾಡಿತು. ಆಗ ತಮ್ಮ ತಪ್ಪಿನ ಅರಿವಾಗಿ ಬಹಳ ಪಶ್ಚಾತ್ತಾಪದಿಂದ ತಮ್ಮ ಮನಃಸಂಕಲ್ಪದಿಂದಲೇ 'ರಾಮ - ಲಕ್ಷ್ಮಣ' ರೆಂಬ ಕೊಪ್ಪರಿಗೆಗಳನ್ನು ಸೃಷ್ಟಿ ಮಾಡಿ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಿದರು. ಅವರ ತಂಗಿ ದೆಯ್ಯಾರೆ ಕುಮಾರಪರ್ವತದಲ್ಲಿ ನೆಲೆಗೊಂಡಳು.

⚔️

ಪಡುಮಲೆಯಲ್ಲಿ ಆದಿನೆಲೆ

ಬಲ್ಲಾಳರಸರ ಬಂಧಮುಕ್ತಿ

ಪೂಮಾಣಿ - ಕಿನ್ನಿಮಾಣಿಯರು ಅಲ್ಲಿಂದ ಬಿಟ್ಟ ಇನ್ನೊಂದು ಬಾಣವು ಸಸ್ಯಜಲಸಮೃದ್ಧವಾದ ಮತ್ತು ಸತ್ಕರ್ಮಶಾಲಿಗಳಾದ ಜನರುಳ್ಳ ಊರಾದ 'ಪಡುಮಲೆ'ಯಲ್ಲಿ ಬಿದ್ದಿತು. ಪೂಮಾಣಿ - ಕಿನ್ನಿಮಾಣಿಯರು ಅಲ್ಲಿಗೆ ಬಂದು ಬಲ್ಲಾಳರಸರ ಮನೆಯಲ್ಲಿ ಬಲ್ಲಾಳಬ್ಬೆಯೊಡನೆ "ನಾವು ವಿಷ್ಣುವಿನ ಆದೇಶದಂತೆ ಈ ತುಳುನಾಡಿನಲ್ಲಿ 101 ಬಂಡಿ ಪಾಪೆ, 1001 ಮಾಡರ ಮನೆಗಳಿಂದ ಜನರಲ್ಲಿ ದೈವಪ್ರಜ್ಞೆಯನ್ನುಂಟುಮಾಡಿ ಸಚ್ಚಾರಿತ್ರ್ಯವನ್ನು ನೆಲೆಗೊಳಿಸಬೇಕಾಗಿದೆ. ನಮಗೆ ಈ ಪಡುಮಲೆಯಲ್ಲಿ ಆದಿನೆಲೆಯಾಗಬೇಕು: ಬಲ್ಲಾಳರೆಲ್ಲಿದ್ದಾರೆ" ಎಂದು ಕೇಳಿದರು.

ಆಗ ಬಲ್ಲಾಳಬ್ಬೆ "ಅವರು ಹನ್ನೆರಡು ವರ್ಷಗಳ ಹಿಂದೆ ಯುದ್ಧಕ್ಕೆ ಹೋದವರು ಹಿಂದಿರುಗಿ ಬರಲಿಲ್ಲ. ವೈರಿಗಳ ಬಂಧನದಲ್ಲಿದ್ದಾರೆ. ಅವರನ್ನು ನೀವು ಬಂಧಮುಕ್ತರಾಗಿಸಿದರೆ ನಮ್ಮ ಪಡುಮಲೆಯಲ್ಲಿ ಆದಿನೆಲೆಯನ್ನು ಒದಗಿಸುತ್ತೇವೆ" ಎಂದರು.

ಪೂಮಾಣಿ - ಕಿನ್ನಿಮಾಣಿಯರು, "ನಾವು ಅವರನ್ನು ಈ ಕ್ಷಣ ಬಂಧ ಮುಕ್ತರನ್ನಾಗಿಸುತ್ತೇವೆ" ಎಂದು ಅಭಯಹಸ್ತವನ್ನು ನೀಡಿದರು.

ಆಗ ಬಲ್ಲಾಳಬ್ಬೆ ತನ್ನ ಹೃದಯಾಂತರಾಳದ ಮಾತಿನಿಂದ "ನೀವು ನಮ್ಮ ಬಲ್ಲಾಳರನ್ನು ಬಂಧಮುಕ್ತರನ್ನಾಗಿ ಮಾಡಿದರೆ ನಿಮಗೆ ಬಂಡಿಪಾಪೆ, ಕೊಡಿ (ಧ್ವಜ) ಏರಿದ ಜಾತ್ರೆ, ನೇಮೋತ್ಸವವನ್ನು ಎರಡು ಊಟ ಮಾಡುವ ಮೊದಲು ಕೊಡುವೆವು" ಎಂದರು.

ತತ್ಕ್ಷಣ ಪೂಮಾಣಿ - ಕಿನ್ನಿಮಾಣಿಯರು ನಿಂತ ನೆಲದಿಂದಲೇ ಬಿಟ್ಟ ಬಾಣವು ಬಲ್ಲಾಳರನ್ನು ಬಂಧಿಸಿದ ಸಂಕೋಲೆಗಳನ್ನು ಕಡಿದು ಬಂಧಮುಕ್ತರನ್ನಾಗಿಸಿದುವು. ಮುಕ್ತರಾದ ಬಲ್ಲಾಳರು ಕೂಡಲೇ ಪಡುಮಲೆಗೆ ಬರಲಾಗಿ ಎಲ್ಲರಿಗೂ ಮೃಷ್ಟಾನ್ನ ಊಟ ಕೊಡಿಸಿದರು ಮತ್ತು ಮುಂದಿನ ಊಟಕ್ಕೆ ಮೊದಲು ಬೀಡಿನ ಪಶ್ಚಿಮಕ್ಕಿದ್ದ ಹೆಬ್ಬಲಸಿನ ಮರದಿಂದ ಪಾಪೆಬಂಡಿ, ಪೂರ್ವ ದಿಕ್ಕಿನಲ್ಲಿದ್ದ ಇನ್ನೊಂದು ಮರದಿಂದ ಧ್ವಜಸ್ತಂಭ (ಕೊಡಿಮರ) ಮಾಡಿಸಿ ಪೂಮಾಣಿ, ಕಿನ್ನಿ ಮಾಣಿಯರಿಗೆ ನೇಮೋತ್ಸವ (ನೇಮನೇರಿ) ಕೊಡಿಸಿದರು.

ಮುಂದಿನ ಒಂದು ನೆಲೆಯನ್ನು ನಿರ್ಧರಿಸುವುದಕ್ಕಾಗಿ ಪೂಮಾಣಿ - ಕಿನ್ನಿಮಾಣಿಯರು ಬಿಟ್ಟ ಇನ್ನೊಂದು ಬಾಣವು ಪಾಣಾಜೆಯಲ್ಲಿ ಬಿದ್ದಿತು. ಮತ್ತೊಂದು ಬಾಣವು ಇರ್ದೆ ಗ್ರಾಮದ ಬಿಸಿನೀರು ತೀರ್ಥದ ಬಳಿ ಬಿದ್ದಿತು. ಅಲ್ಲೆಲ್ಲ ಅವರು ನೆಲೆಯಾದರು.

🔔
🏛️

ಕದಿಕೆ ಚಾವಡಿ

ಹೆಸರಿನ ಮೂಲ ಮತ್ತು ನ್ಯಾಯ ಚಾವಡಿ

ಕಾರಣಾಂತರಗಳಿಂದ ನೇಮೋತ್ಸವಗಳಿಗೆ ಬೆಂದ್ರು ತೀರ್ಥದಿಂದ ಕೂಗಳತೆಯ ದೂರದಲ್ಲಿರುವ "ಕದಿಕೆ ಚಾವಡಿ"ಯ ಜಾಗವು ಪ್ರಶಸ್ತವೆಂದು ತಿಳಿದು ಅತ್ಯವಸರದಲ್ಲಿ ಬ್ರಹ್ಮಸಭೆ ನಡೆದು ಮೂಜೂರಿನವರನ್ನು (ಪಡುಮಲೆ, ಪಾಣಾಜೆ, ಇರ್ದೆ) ಕರೆದು, ಗುತ್ತು ಬಾರಿಕೆಯವರನ್ನು ಸೇರಿಸಿ, ಶ್ರೀ ವಿಷ್ಣುಮೂರ್ತಿ ದೇವರ ಅನು (ಒಪ್ಪಿಗೆ) ಪಡೆದು ಕದಿಕೆ ಕಟ್ಟಿ, ಅದರೊಳಗೆ ಭಂಡಾರವನ್ನು ಇರಿಸಿ ಭವ್ಯವಾದ ನೇಮ ನೇರಿಯನ್ನು ಕೊಟ್ಟ ಕಾರಣದಿಂದ ಈಗಲೂ ದೈವಗಳ ಭಂಡಾರವನ್ನು ಕದಿಕೆ ಕಟ್ಟಿ ಅದರೊಳಗೆ ಕೇರ್ಪುವುದು (ಇರಿಸುವುದು) ಸಂಪ್ರದಾಯವಾಗಿದೆ. ಮತ್ತು ಆ ಕಾರಣಕ್ಕೆ 'ಕದಿಕೆ ಚಾವಡಿ' ಎಂಬ ಹೆಸರು ಪ್ರಸಿದ್ಧವಾಯಿತು.

ಅದು ನ್ಯಾಯ ಚಾವಡಿಯೂ ಹೌದು. ಬಲ್ಲಾಳರಸರ ಕಾಲದಲ್ಲಿ ಮೊದಲು ಪಡುಮಲೆ, ಆ ಮೇಲೆ ಪಾಣಾಜೆ, ಅಂತಿಮವಾಗಿ ಕದಿಗೆ ಚಾವಡಿಯಲ್ಲೇ ನ್ಯಾಯತೀರ್ಮಾನ ನೀಡಲಾಗುತ್ತಿತ್ತು ಮತ್ತು ಇಲ್ಲಿ ಪ್ರಮಾಣದ ಹಂತ ಬರುತ್ತಿರಲಿಲ್ಲ, ಇರುತ್ತಿರಲಿಲ್ಲ.

🐯

ಮಂತ್ರಿ ದೈವಗಳು

ಪಿಲಿಚಾಮುಂಡಿ ಮತ್ತು ಮಲರಾಯ

🐯

ಪಿಲಿಚಾಮುಂಡಿ & ಮಲರಾಯ

ಕದಿಕೆ ಚಾವಡಿಯಲ್ಲಿ ಪೂಮಾಣಿ - ಕಿನ್ನಿಮಾಣಿಯರ ನೇಮೋತ್ಸವದ ನಂತರ ಮಂತ್ರಿಯರಾದ ಪಿಲಿಚಾಮುಂಡಿ (ಹುಲಿಭೂತ) ಮತ್ತು ಮಲರಾಯ (ಪಂಜುರ್ಲಿ ದೈವದ ಇನ್ನೊಂದು ರೂಪ) ದೈವಗಳಿಗೆ ನೇಮವನ್ನು ಕೊಡುವರು. ನೇಮ ಅಥವಾ ತಂಬಿಲವನ್ನು ಕೊಡದಿದ್ದಲ್ಲಿ ಊರಲ್ಲಿ ಹುಲಿಗಳ ಉಪಟಳ ಆರಂಭವಾಗುವುದೆಂದು ಹಿರಿಯರು ಹೇಳುತ್ತಾರೆ.

🏹

ಪೂಮಾಣಿ - ಕಿನ್ನಿಮಾಣಿಯರು ಮುಂದೆ ಮುಂದೆ ಒಂದೊಂದು ಬಾಣ ಪ್ರಯೋಗದಿಂದ "ಆದಿ ಪಡುಮಲೆಯಿಂದ ಅಂತ್ಯ ಪುತ್ತಿಗೆಯವರೆಗೆ 1001 ಮಾಡರ ಮನೆಗಳಲ್ಲಿ ನೆಲೆಯಾಗಿ 101 ಬಂಡಿ ಪಾಪೆಗಳಿಂದ ನೇಮೋತ್ಸವವನ್ನು ಹೊಂದಿ ತುಳುನಾಡಿನ ಜನರಲ್ಲಿ ದೇವ, ದೈವ ಭಕ್ತಿ, ಶ್ರದ್ಧೆಗಳು ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡಿದರು.